ವೈಕುಂಠದಾಸ
15ನೆಯ ಶತಮಾನದ ಉತ್ತರಾರ್ಧ ಹಾಗೂ 16ನೆಯ ಶತಮಾನದ ಪೂರ್ವಾರ್ಧದಲ್ಲಿ ಆಗಿಹೋದ ಹರಿದಾಸರು. ವ್ಯಾಸರಾಯರು, ವಾದಿರಾಜರು, ಪುರಂದರದಾಸರು, ಕನಕದಾಸರು ಇವರ ಸಮಕಾಲೀನರು. ಹಾಸನ ಜಿಲ್ಲೆಯ ಬೇಲೂರು ಇವರ ಜನ್ಮಸ್ಥಳ. ಪೂರ್ವಾಶ್ರಮದ ಹೆಸರು ಕೇಶವ. ಇವರು ಬಾಲ್ಯದಿಂದಲೂ ವೈರಾಗ್ಯಭಕ್ತಿ ಭರಿತರಾಗಿದ್ದರು. ಲೋಕಕ್ಕೆ ಮಂಕನಂತೆ ಕಾಣುತ್ತಿದ್ದರೂ ಅಂತರಂಗ ವಿಕಾಸ ಹೊಂದುತ್ತಿದ್ದ ಮಹಾವ್ಯಕ್ತಿಯಾಗಿದ್ದರು. ಸೌಮ್ಯನಾಯಕಿ ಎಂಬುವ ರೊಂದಿಗೆ ವಿವಾಹವಾದ ಮೇಲೂ ಹಿರಿಯರ ನಿರೀಕ್ಷೆ ಫಲಿಸದೆ ತನ್ನ ಪ್ರವೃತ್ತಿಯಲ್ಲಿ ಪಲ್ಲಟವಾಗದೆ ಲೋಕಾಸಕ್ತಿಯಿಂದ ಅತಿದೂರರಾಗಿ, ಚೆನ್ನಕೇಶವಸ್ವಾಮಿಯನ್ನು ಒಲಿಸಿಕೊಳ್ಳುವುದ ರಲ್ಲಿಯೇ ಪೂರ್ಣಾಸಕ್ತರಾ ಗಿದ್ದರು. ಚೆನ್ನಕೇಶವ ಸಾಕ್ಷಾತ್ಕಾರವನ್ನು ಹೊಂದಿದ ಅನಂತರ ವೈಕುಂಠಕೇಶವನೆಂಬ ಮುದ್ರಿಕೆಯಿಂದ ಕನ್ನಡದಲ್ಲಿ ದೇವರನಾಮಗಳನ್ನು ರಚಿಸಲು ಆರಂಭಿಸಿ, ಅಂದಿನಿಂದ ವೈಕುಂಠದಾಸ ರೆಂದು ಪ್ರಸಿದ್ಧರಾದರು.

	ದೊರೆತಿರುವ ಇವರ ಕೃತಿಗಳಲ್ಲಿ ಹೆಚ್ಚಿನವು ಅನುಭಾವ ಗೀತೆಗಳು. ಇವುಗಳಲ್ಲಿ ಚೆನ್ನಕೇಶವ ವೇಷಾಂತರಗಳಿಂದ ತಮ್ಮೊಂದಿಗೆ ಆಟವಾಡಿದ ಸನ್ನಿವೇಶಗಳನ್ನು, ಮೆರೆದ ಪವಾಡಗಳನ್ನು ಚೆನ್ನಾಗಿ ಬಣ್ಣಿಸಿದ್ದಾರೆ.

	ಅಚ್ಯುತದಾಸರೆಂಬುವರು ಬಿರುದು ಬಾವಲಿಗಳ ಬಯಕೆಯಿಂದ, ವಿದ್ಯಾಹಂಕಾರದಿಂದ ದಾಸರನ್ನು ಎದುರಿಸಿದ ಪರಿಣಾಮವಾಗಿ ಕಣ್ಣು ಕಳೆದುಕೊಂಡು ಒದ್ದಾಡಿದಾಗ ಕೇಶವನನ್ನು ಪ್ರಾರ್ಥಿಸಿ ವೈಕುಂಠದಾಸರೇ ಅವರಿಗೆ ದೃಷ್ಟಿದಾನ ನೀಡಿದರಂತೆ. ಅಚ್ಯುತದಾಸರು ಇವರನ್ನು ಮಹಾ ಮಹಿಮರೆಂದು ಸ್ತುತಿಸಿರುವ ಕೃತಿಯೊಂದು ಇದೆ.

ಉಡುಪಿಯ ಸೋದೆ ಮಠದ ಗುರುಗಳಾದ ವಾದಿರಾಜರು ಬೇಲೂರಿಗೆ ಬಂದಾಗ ವೈಕುಂಠದಾಸರೊಂದಿಗೆ ಹಲವು ಕಾಲ ಇದ್ದರೆಂದು ಪ್ರತೀತಿ. ಅವರು ವೈಕುಂಠದಾಸರನ್ನು ಕುರಿತು ವೇಲಾಪುರದರಸನ ಪ್ರತಿಬಿಂಬರಾದ ವೈಕುಂಠ ದಾಸೋತ್ತಮ, ಎನಗೆ ಶ್ರೀಹರಿಯನ್ನು ತೋರಿ ಧನ್ಯ ಮಾಡಿದೆ ಎಂದು ಹಾಡಿದ್ದಾರೆ. ವೈಕುಂಠದಾಸರು ವಾದಿರಾಜರನ್ನು ಕುರಿತು ಸ್ತೋತ್ರ ಮಾಡಿರುವ ಕೃತಿಗಳೂ ಇವೆ. ಸುಮಾರು ಎಪ್ಪತ್ತು ವರ್ಷಗಳಷ್ಟು ಕಾಲ ಬೇಲೂರಿನಲ್ಲಿ ವೈರಾಗ್ಯಭಕ್ತಿಪ್ರಧಾನವಾದ ಆಧ್ಯಾತ್ಮಿಕ ಬದುಕನ್ನು ಬಾಳಿ ಮಹಿಮಾಪುರುಷರೂ ಪವಾಡಪುರುಷರೂ ಲೋಕೋಪಕಾರಿಗಳೂ ಎಂದು ಪ್ರಸಿದ್ಧರಾದ ವೈಕುಂಠದಾಸರು ಕನ್ನಡದಲ್ಲಿ ನೂರಾರು ಕೃತಿಗಳನ್ನು ರಚಿಸಿರುವರಾದರೂ ಅವುಗಳ ಶೋಧನೆ ಪ್ರಕಟಣೆ ಆಗಬೇಕಾಗಿದೆ.

	ದಾಸರಿಗೆ ಒಬ್ಬ ಹೆಣ್ಣುಮಗಳು ಇದ್ದಂತೆ ತಿಳಿಯುತ್ತದೆ. ಇವರು ಹೇಳುತ್ತಿದ್ದ ಕೀರ್ತನೆಗಳನ್ನು ಇವರ ಶಿಷ್ಯ ವರದ ತಾಳೆಯೋಲೆಯಲ್ಲಿ ಬರೆದಿಡುತ್ತಿದ್ದನಂತೆ.	
(ಕೆ.ಎಮ್.ಕೆ)

   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ